damnlyrics.com

Ninna angaladolage

ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ

ಘನ್ನ ಶ್ರೀಗುರುರಾಘವೇಂದ್ರ ಸಂಪನ್ನ ।।ಪ ।।

ವರುಷ ವರುಷಕೆ ನಿನ್ನ ದರುಶನವ ದಯಾ ಮಾಡೋ

ದುರಿತ ನಾಶನ ಗೈದು ಪರಿಶುದ್ಧಗೊಳಿಸೋ

ಅರಿತು ಅರಿಯದೆ ಗೈವ ಪಾಪ ಕರ್ಮವ ಕಳೆದು

ನಿರುತ ಶ್ರೀಹರಿ ಕೃಪೆಗೆ ಪಾತ್ರನಾಗಿರಿಸೋ ।।೧।।

ನಿನ್ನ ಭಕುತರ ಪಾದ ರಜದೊಳಿದಾಡಿಸೋ

ನಿನ್ನ ಗುಣ ಕೀರ್ತನೆಯ ಕಿವಿಗಳಲಿ ನಿಲಿಸೋ

ನಿನ್ನ ಪಾದೋದಕದಿ ಪಾವನ್ನ ಮಾಡೆನ್ನ

ನಿನ್ನ ರಘುಪತಿ ದಿವ್ಯ ದರುಶನವ ಕೊಡಿಸೋ ।।೨।।

ಮಂತ್ರ ಸದನದಿ ನಿನ್ನ ಸಂತಸ ಮಹೋತ್ಸವದಿ

ಶಾಂತಿ ಸುಖ ಸಂಭ್ರಮದಿ ಸನ್ನಿಧಿಯೊಳಿರಿಸೋ

ಸಂತ ಶರಣರ ಭಕುತಿ ನೃತ್ಯಗೀತಗಳ ನೋಡಿ

ನಲಿಯುವ ಭಾಗ್ಯ ಕೊಡು ಎನಗೆ ಪ್ರಭುವೇ ।।೩।।

ಪ್ರಲ್ಹಾದ ರಾಯನೀ ಬಲ್ಲಿದನು ಜಗದೊಳಗೆ

ಕಾಯ್ವ ನರಹರಿ ದೂತಾನಹುದೋ

ಎಲ್ಲ ರಾಜರ ರಾಜ ವ್ಯಾಸರಾಯನೇ ಸತ್ಯ

ಇಲ್ಲಿ ಶ್ರೀ ಪರಿಮಳರಾಯರ ಮಹಿಮೆಯೇ ಸ್ತುತ್ಯ ।।೪।।

ಏನು ಬೇಡಲಿ ನಾನು ದಾನ ಕರ್ಣನು ನೀನು

ಜ್ಞಾನಿ ಸದ್ಗುರು ಕಲ್ಪವೃಕ್ಷ ಸುರಧೇನು

ದೀನ ರಕ್ಷಕ ವಿಠಲೇಶ ಕರುಣಾಭರಣ

ಸಾನುರಾಗದಿ ನಿನ್ನ ಸೇವಕರೊಳಿರಿಸೋ।।೫।।

Lyrics Submitted by Rajani Naveen

Enjoy the lyrics !!!